top of page

ನಮ್ಮವರು

Updated: Aug 17

ಸುರತ್ಕಲ್ ತಲುಪಿದ್ದೆ ತಡ, ಕ್ಯಾಮೆರಾ ಹಿಡಿದು 70-600ಎಂಎಂ ಲೆನ್ಸ್ ಹಾಕಿ ಛಾವಣಿಯ ಮೇಲೆ ಹೋಗಿ ಒಂದು ಮೂಲೆಯಲ್ಲಿ ಕುಳಿತೆ. ಮನೆಯ ಮುಂದೆ ಇದ್ದ ದೊಡ್ಡ ಅಂಗಳದಲ್ಲಿ 10-12 ಉದ್ದುದ್ದ ಮರಗಳ ಮಧ್ಯೆ ಒಂದು ಮರದಿಂದ “ಕಾ… ಕಾ…” ಎಂದು ಕಾಗೆಯ ಕೂಗು ಕೇಳಿಸಿತು. ಈ ಕೂಗಿಗೆ ನನ್ನದೇನೂ ಕಮ್ಮಿ ಇಲ್ಲ ಎಂದೂ ಅದೇ ಮರದಲ್ಲಿದ್ದ ಅಕ್ಕಪಕ್ಕದ ಕಾಗೆಗಳು ಒಂದೇ ಸಮನೆ ಕೂಗಿದವು. ಇನ್ನು ಬೇರೆ ಮರಗಳಲ್ಲಿದ್ದ ಕಾಗೆಗಳಂತೂ  ʼನಾ ಮುಂದು ತಾ ಮುಂದುʼ ಅಂತ ಕೂಗಿಕೊಂಡು ನನ್ನ ತಲೆಮೇಲಿಂದ ಹಾರಿ ಹೋಗಿ ಮನೆಯ ಹಿಂದಿದ್ದ ತೆಂಗಿನ ಮರದ ಮೇಲೆ ಕುಳಿತು ಅದೇ ರಾಗದಲ್ಲಿ “ಕಾ… ಕಾ…” ಎಂದು ಚೀರಾಟ ಮಾಡತೊಡಗಿದವು.



ree


ಇದನ್ನೆಲ್ಲ ಸದ್ದಿಲ್ಲದೆ ಕ್ಯಾಮೆರಾ ಹಿಡಿದು ಕೂತಿದ್ದ ನನಗೆ ಒಮ್ಮೆಲೇ ಆಭಾಸವಾಯಿತು. ಇದೇನಾದರೂ ನನ್ನನ್ನೇ ನೋಡಿ ಹೀಗೆ ಕೂಗಿದವ? ಆದರೂ ಈ ವಿಚಾರವನ್ನು ಬದಿಗಿಟ್ಟು ನನಗೆ ಬೇಕಾದ ಪಕ್ಷಿಯ ಚಿತ್ರವೊಂದನ್ನು ಸೆರೆಹಿಡಿಯಲು ಕಾದು ಕುಳಿತೆನು. ಸುಮಾರು 15 ನಿಮಿಷ ಕಳೆದರೂ ಕಾಗೆಗಳ ಜುಗಲ್ಬಂದಿ ಬಿಟ್ಟು ಬೇರಾವ ಪಕ್ಷಿಗಳು ಹತ್ತಿರದ ಯಾವುದೇ ಮರದಲ್ಲಿರಲಿಲ್ಲ.


ನನಗಂತೂ ಈ ಕಾಗೆಗಳ ಕಛೇರಿ ಮೂಗಿನ ತುದಿಯಲ್ಲಿ ಕೋಪ ತರಿಸಿತ್ತು. ಒಂದೇ ಸಮನೆ 20 ನಿಮಿಷಗಳ ಕಛೇರಿ ಕೇಳಲಾಗದೆ, ಸೀದಾ ಕೆಳಗಿಳಿದು ಮನೆಯ ಒಳಗೆ ಹೆಜ್ಜೆ ಇಟ್ಟಾಗ ನೀರಸ ಮೌನ. “ಅರೆ! ಇದೇನಿದು ಇಷ್ಟೊತ್ತು ʼನಾನು ನಾನೆ ನೀನು ನೀನೆʼ ಎನ್ನುವ ಕರ್ಕಶ ಸಂಗೀತ ಕಛೇರಿಯು, ನಾನು ಎದ್ದು ಬಂದದಕ್ಕೆ ನಿಂತು ಹೋಯಿತೇ?”

 

“ಮತ್ತೆ ಹೋಗಿ ನೋಡುವ ನನ್ನಿಂದ ಭಗ್ನವಾದದ್ದು ನಿಜನೇನಾ? ನೋಡಿ ಬಿಡುವ” ಎಂದು ಛಾವಣಿಯ ಮೆಟ್ಟಿಲೇರುತ್ತಿದ್ದಾಗ ಶುರುವಾಯಿತು ಅದೇ ರಾಗ, ಅದೇ ಹಾಡು, ಅದೇ ಹಾರಾಟ. “ನಿಮ್ಮ ಕಛೇರಿ ನಿಂತರೇನೇ ಒಳ್ಳೆಯದು” ಎಂದು ಮನಸ್ಸಿನಲ್ಲೆ ಗುಣುಗುತ್ತಾ ಮತ್ತೆ ಮನೆಗೆ ಮರಳಿದೆನು. ಮನೆಯಲ್ಲಿ ಚಾ ಕುಡಿಯುತ್ತಾ ಆಲೋಚಿಸಿದೆ. “ಅದೇನದು ನಾನು ಹೋದರೆ ಮಾತ್ರ ಈ ಕಾಗೆಗಳು ಕಿರುಚುವುದು. ನನ್ನನು ಅಲ್ಲಿಂದ ಓಡಿಸಲೆಂದೇ ಈ ಕಾಗೆಗಳು ಹಾಗೆ ಮಾಡಿದವ?ನಾನೇನಾದರೂ ಅಪಾಯ ತಂದೊಡ್ಡುವ ಹಾಗೆ ಮಾಡುವೆನೆಂದು ಅವುಗಳಿಗೆ ಭಯವಾದವ? ಏನಿರಬಹುದು?” ಎಂದು ಗಾಢವಾಗಿ ಯೋಚಿಸಿದಾಗ ಹೊಳೆದದ್ದು ಆ ಮರದಲ್ಲಿ ಕಾಗೆಯ ಗೂಡಿನಲ್ಲಿ ಅದರ ಮರಿಗಳಿರಬಹುದೆಂದು. ಆ ಮರಿಗಳಿಗೆ ನನ್ನಿಂದೇನಾದರು ಅಪಾಯ ಇರಬಹುದೇ ಎಂಬ ಆತಂಕದಿಂದ ಕಾಗೆಗಳು ನನ್ನನ್ನು ಅಟ್ಟಿಸಿದವೆಂದು. ಇದನ್ನು ಪರಿಶೀಲಿಸಿ ಬಿಡುವೆನೆಂದು ಮನೆಯ ಕಿಟಕಿಯಿಂದ ಆ ಮರದ ಕೊಂಬೆಗಳ ಮೇಲೆ ಕ್ಯಾಮೆರಾದಿಂದ ಸ್ಕ್ಯಾನ್ ಮಾಡಿದೆ. ನಿಜ! ಅಲ್ಲಿ ಒಂದೆರಡು ಗೂಡಂತೂ ಇತ್ತು. ಮರಿಗಳು ಸಹ ಅದರಲ್ಲಿರಬಹುದು ಎಂದು ಅನಿಸಿ ಸುಮ್ಮನಾದೆ.


ಕೆಲ ಸಮಯ ಕಳೆದ ನಂತರ ಮತ್ತೆ ಛಾವಣಿಯ ಮೇಲೆ ಹೋದೆ. ಮತ್ತೆ ಈ ಕಾಗೆಗಳ ಕಿರುಚಾಟ ಶುರು. ಭೂಕಂಪವಾದ ಹಾಗೆ ಅನುಭವ. “ಎಲಾ ಕುನ್ನಿ! ಹ್ಮ್ಮ್!” ಎಂದು ಕೋಪದಿಂದ ಇಳಿದು ಬಂದೆ. “ಈ ಮರಿಗಳ ರಕ್ಷಣೆಗೆ ಅದರ ಅಪ್ಪ ಅಮ್ಮ ಕಿರುಚಿದರೆ ಒಪ್ಪಬಹುದು. ಆದರೆ ಈ ಊರಲ್ಲಿರುವ ಎಲ್ಲ ಕಾಗೆಗಳು ಇದರ ರಕ್ಷಣೆಗೇಕೆ ಬರಬೇಕು. ಅದರ ಅದರ ಮನೆಗಳಿಲ್ಲವೇ? ಅವುಗಳ ಮರಿಗಳಿಲ್ಲವೇ? ಸುಮ್ಮನೆ ಬೇರೆ ಕಾಗೆಗಳ ಪರ್ಸನಲ್ ಮ್ಯಾಟರ್ ಅಲ್ಲಿ ಉಳಿದ ಕಾಗೆಗಳೇಕೆ ತಲೆಕೊಡಬೇಕು? ಏನಾದರೂ ತಪ್ಪಾದರೆ ಅದನ್ನು ಸರಿಮಾಡಲು ದೇವರಿದ್ದಾನಲ್ಲ. ಬೇರೆ ಯವರ ಮನೆಯ ಬಗ್ಗೆ ಇತರರಿಗೇನು ಉಸಾಬರಿ” ಮನಸಲ್ಲೇ ಬಯ್ಯುತ್ತ ಮನೆಯಲ್ಲೇ ಕುಳಿತೆ.


ಯಶಸ್ವಿ ಜೆ

ಬೆಂಗಳೂರು

 
 
 

Comments


bottom of page