top of page

ನೀವು ಯಾರು?

Updated: Aug 17

ಕೊರೊನ ಎಲ್ಲರನ್ನು ಗೃಹಬಂಧನದಲ್ಲಿರಿಸಿದ್ದ ಸಮಯ. ಕೆಲ ತಿಂಗಳು ಮನೆಯಲ್ಲಿಯೇ ಇದ್ದು ಬೋರ್‌ ಆಗಿ ಒಂದು ಶನಿವಾರ ಕ್ಯಾಮರ ಹಿಡಿದು ಹೊರಗೆ ಹೋಗಿ ಬರುತ್ತೇನೆಂದು ಹೇಳಿದೆ. ಬೆಳಗ್ಗೆ 7 ಗಂಟೆಗೆ ನಾಗಮಂಗಲ ಕಡೆ ಗೂಗಲ್‌ ಮ್ಯಾಪ್‌ ಹಾಕಿ ಹೊರಟೆ. ಮಂಡ್ಯ ಜಿಲ್ಲೆಯಲ್ಲಿರುವ ಸಣ್ಣ ತಾಲೂಕು. ಬೆಂಗಳೂರಿಂದ ಮಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ ನೆಲ್ಲಿಗೆರೆ ಸರ್ಕಲ್‌ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ಸುಮಾರು 15 ಕಿ.ಮಿ ದೂರ ಹೋದರೆ ನಾಗಮಂಗಲ ಎಂಬ ಜನನಿಬಿಡ ಪ್ರದೇಶಕ್ಕೆ ತಲುಪುತ್ತೇವೆ. ಇದೇ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ರಥಬೀದಿಯಲ್ಲಿರುತ್ತೀರಿ. ಸುಮಾರು 200ಮಿ ದೂರದಲ್ಲಿ ಸುಂದರವಾದ ಸೌಮ್ಯಕೇಶವ ಸ್ವಾಮಿ ದೇವಾಲಯದ ಗೋಪುರ ಹಾಗೂ ಸ್ತಂಭ ಕಾಣಿಸಿತು.


ಹೊಯ್ಸಳರ ಆಳ್ವಿಕೆಯಲ್ಲಿ ಕಟ್ಟಿಸಿದ ಈ ದೇವಾಲಯವು ೧೨ನೇ ಶತಮಾನದ್ದು. ಇಲ್ಲಿಗೆ ಭೇಟಿ ನೀಡುವ ಮುಂಚೆ, ನಾಗಮಂಗಲ ಹಾಗೂ ಈ ದೇವಾಲಯದ ಬಗ್ಗೆ ನನಗೆ ಅಷ್ಟೇನು ವಿಷಯ ತಿಳಿದಿರಲಿಲ್ಲ. ದೇವಾಲಯದ ಮುಖ್ಯದ್ವಾರದಲ್ಲಿ ಭಾರತೀಯ ಪುರತತ್ವ ಇಲಾಖೆಯು ದೇವಸ್ಥಾನದ ಇತಿಹಾಸದ ಬಗ್ಗೆ ಹಾಕಿದ್ದ ಫಲಕವನ್ನು ಓದಿ ದೇವಸ್ಥಾನದ ಬಗ್ಗೆ ತಿಳಿದುಕೊಂಡೆ. ಮುಖ್ಯ ದ್ವಾರದಿಂದ ಒಳಗೆ ಹೋದರೆ ಮಹಾಮಂಟಪದಲ್ಲಿ 15-20 ಅಡಿ ಎತ್ತರದ ಕಂಬಗಳು ಆಕರ್ಷಕವಾಗಿ ಕಂಡಿತು. ಹೋರಗೆ ಬಿಸಿಲಿದ್ದರೂ ಒಳಗೆ ಮಂದ ಬೆಳಕಿನಲ್ಲಿ ಈ ಗಜಗಾತ್ರದ ಕಂಬಗಳ ಇತಾಹಾಸವನ್ನು ನೋಡಿದ ಕೂಡಲೆ ಹೇಳಬಹುದು, ಇದು ಹೊಯ್ಸಳರ ಕಾಲದ್ದು ಎಂದು. ದೇವರಿಗೆ ಕೈಮುಗಿದು ಎಡಕ್ಕೆ ನಡೆದರೆ ಹೊಯ್ಸಳರ ತಲಕಾಡು ಸೊಮನಾಥಪುರ, ಬೇಲೂರು, ಹಳೆಬೀಡಿನಂತಹ ಶೈಲಿಯ ಹಾಗೇ ನಕ್ಷತ್ರದ ಆಕಾರ ದಲ್ಲಿರುವ ತಳಭಾಗವಿರುವುದಾಗಿ ಭಾಸವಾಗುತ್ತದೆ.



Soumya Keshava Temple  ©Copyright Yashaswi Jayakumar
Soumya Keshava Temple ©Copyright Yashaswi Jayakumar


ಕೊರೊನದ ಭೀತಿಯಿಂದ ಬಹಳ ಕಡಿಮೆ ಜನ ಇದ್ದುದರಿಂದ ನನಗೆ ಬೇಕಾದ ಹಾಗೆ ಕ್ಯಾಮರದಲ್ಲಿ ಈ ದೇವಾಲಯದ ಸೌಂದರ್ಯವನ್ನು ಸೆರೆಹಿಡಿದು ಹೊರಗೆ ಬಂದೆ. ಹೊರಗೆ ಬಂದಾಗ ಎದುರಿಗೆ ೪-೫ ಜನ, ಸುಮಾರು 60-80ವಯಸ್ಸಿನ ವೃದ್ಧರು ಮಾತಾಡುತ್ತಿದ್ದರು. ಇವರಲ್ಲಿ ಒಬ್ಬರು ಕರೆದು ಈ ಊರು ಹಾಗೂ ದೇವಸ್ಥಾನದ ಬಗ್ಗೆ ತುಂಬಾ ಇತಿಹಾಸವಿದೆ ಎಂದು ಹೇಳಲು ಪ್ರಾರಂಭಿಸಿದರು. ಈ ಊರಿನಲ್ಲಿ ಸುಮಾರು 185 ಶಿಲಾಶಾಸನಗಳಿವೆ ಎಂದು ಹೇಳಿದಾಗ ಆಶ್ಚರ್ಯವಾದರೂ ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ. ಇವರು ಹೇಳಿ ಮುಗಿಸಿದ ಮೇಲೆ ಇವರ ಬಗ್ಗೆ ತಿಳಿದು ಕೊಳ್ಳೋಣ ವೆಂದು “ನೀವು ಯಾರು ಹಾಗೂ ನಿಮಗೆ ಈ ಊರಿನ ಬಗ್ಗೆ ಹೇಗೆ ಇಷ್ಟೆಲ್ಲಾ ವಿಷಯ ತಿಳಿದಿದೆ” ಎಂದು ಕೇಳಿದೆ. ಆಗ ಇವರ ಜೊತೆಗಿದ್ದವರು “ಇವರ ಹೆಸರು ಮೊಹಮ್ಮದ್‌ ಖಲೀಮುಲ್ಲಾ. ಇವರು ಈ ಊರಿನವರೇ ಹಾಗೂ ಶಾಲಾ ಶಿಕ್ಷಕರಾಗಿದ್ದವರು. ಈ ಊರಿನ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲು ಶ್ರಮಿಸಿದ ವ್ಯಕ್ತಿ. ಈ ಊರಿನ ಬಗ್ಗೆ ಮತ್ತು ಇಲ್ಲಿನ ಎಲ್ಲಾ ಐತಿಹಾಸಿಕ ಶಿಲಾನ್ಯಾಸಗಳ ಬಗ್ಗೆ ತಿಳಿದು ಕೊಂಡಿರುವವರು ಇವರೊಬ್ಬರೆ. ಇವರ ಬಗ್ಗೆ ನಮಗೆ ಅತ್ಯಂತ ಹೆಮ್ಮೆ ಇದೆ” ಎಂದರು. ಇವರ ಬಗ್ಗೆ ತಿಳಿದು ಕೊಳ್ಳಲು ಕುತೂಹಲವಂತು ಹುಟ್ಟಿತು. ಅಲ್ಲಿಯೇ ಕೆಲ ಕಾಲ ಇದ್ದು ಮರಳಿ ಬೆಂಗಳೂರಿಗೆ ಸಂಜೆಯಾಗುವಷ್ಟರಲ್ಲಿ ತಲುಪಿದೆ.


ಸೆರೆ ಹಿಡಿದ ಎಲ್ಲಾ ಚಿತ್ರಗಳನ್ನು ಪ್ರೊಸೆಸ್‌ ಮಾಡುವಾಗ ಮತ್ತೆ ಖಲೀಮುಲ್ಲಾ ನೆನಪಾದರು. ಇವರ ಬಗ್ಗೆ ತಿಳಿದು ಕೊಳ್ಳಲು ಅಂತರ್ಜಾಲದಲ್ಲಿ ಪ್ರಯತ್ನಿಸಿದೆ. ಅಷ್ಟೇನು ಮಾಹಿತಿ ಸಿಗದೆ ಸುಮ್ಮನಾದೆ. ಕೆಲವು ತಿಂಗಳ ನಂತರ 2022ರಲ್ಲಿ ಇವರನ್ನು ಡೆಕ್ಕನ್‌ ಹೆರಾಲ್ಡ್‌ Changemakers 22 – Preserving History in Mandya’s Backyard ಎಂಬ ಕಾರ್ಯಕ್ರಮದಲ್ಲಿ ನೋಡಿದೆ. ಇವರ ಸಾಧನೆ ಬಹಳ ದೊಡ್ಡದೇ ಇದೆ ಎಂದು ತಿಳಿದು ಹೆಮ್ಮೆ ಎನಿಸಿತು.


ಬಿಡುವಿನ ಸಮಯದಲ್ಲಿ ಈ ಊರಿಗೆ ಹಾಗೂ ಶ್ರೀ ಸೌಮ್ಯಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ಹಾಗೂ ಖಲಿಮುಲ್ಲ ಅವರ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ಮರೆಯಬೇಡಿ.


Mohammad Khaleemulla - Photo credits Deccan Herald
Mohammad Khaleemulla - Photo credits Deccan Herald


ಖಲೀಮುಲ್ಲಾ ಅವರ ಬಗ್ಗೆ



ಯಶಸ್ವಿ ಜೆ

ಬೆಂಗಳೂರು

 
 
 

Comments


bottom of page